ದಿನಾಂಕ 17-03-2015 ರಂದು ಬೆಳಿಗ್ಗೆ ಪೊಲೀಸ್ ಸಮುದಾಯ ಭವನದಲ್ಲಿ ಶಾಲಾ ಮಕ್ಕಳ ಸುರಕ್ಷತಾ ಬಗ್ಗೆ ಅನುಸರಿಸಬೇಕಾದ ಮಾರ್ಗಸೂಚಿಗಳ ಸಭೆ ನಡೆದಿದ್ದು, ಸದ್ರಿ ಸಭೆಯಲ್ಲಿ ಮಂಗಳೂರು ನಗರ ವ್ಯಾಪ್ತೀಯ ಶಾಲಾ ವ್ಯವಸ್ಥಾಪಕರು, ಪ್ರಾಧ್ಯಾಪಕರು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 500 ಜನ ಭಾಗವಹಿಸಿರುತ್ತಾರೆ.
ಸಭೆಯ ಫೋಟೋ
ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳು -ಕರಡು
1] (ಎ) ಶಾಲಾ ವಾಹನಗಳು ಖಾಸಗಿಯವರ ನಿರ್ವಹಣೆಯಲ್ಲಿದ್ದು, ಪ್ರತಿ ವಾಹನದಲ್ಲಿ ಮಕ್ಕಳ ಪಿಕಪ್ ಮತ್ತು ಡ್ರಾಪ್ ಮಾಡುವವರೆಗೂ ಶಾಲಾ ವತಿಯಿಂದ ಒಬ್ಬ ಜವಾಬ್ದಾರಿಯುತ ಪುರುಷ ಮತ್ತು ಮಹಿಳಾ ಸಿಬ್ಬಂದಿಯವರನ್ನು ಕಡ್ಡಾಯವಾಗಿ ನಿಯೋಜಿಸಬೇಕು. ಸಾರಿಗೆ ಇಲಾಖೆಯಿಂದ ನಿಗದಿಪಡಿಸಿರುವ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಾರದು. ಪ್ರತಿ ಶಾಲಾ ವಾಹನಕ್ಕೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸತಕ್ಕದ್ದು ಹಾಗೂ ಜಿಪಿಎಸ್ ವ್ಯವಸ್ಥೆಯು ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳತಕ್ಕದ್ದು. ವಾಹನ ಚಾಲಕರ ಚಾಲ್ತಿಯಲ್ಲಿರುವ ಚಾಲನ ಪರವಾನಿಗೆ ಹೊಂದಿರುವುದನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಚಾಲಕನ ಪೂರ್ವಾಪರ ನಡತೆಯ ಬಗ್ಗೆ ಸರಹದ್ದಿನ ಪೊಲೀಸ್ ಠಾಣೆಯಿಂದ ವರದಿ ಪಡೆದುಕೊಳ್ಳತಕ್ಕದ್ದು.
(ಬಿ) ಪ್ರತಿ ಶಾಲಾ ವಾಹನದಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಿ, ಈ ವ್ಯವಸ್ಥೆಯು ಸದಾ ಚಾಲ್ತಿಯಲ್ಲಿರುವಂತೆ ಏರ್ಪಾಡು ಮಾಡತಕ್ಕದ್ದು. ಒಂದು ಸಿಸಿಟಿವಿ ಯನ್ನು ಬಸ್ಸಿನ ಒಳಗೆ ಹಾಗೂ ಇನ್ನೊಂದು ಸಿಸಿ ಟಿವಿಯನ್ನು ಬಸ್ಸಿನ ಬಾಗಿಲಿನಿಂದ ರಸ್ತೆ ಕಾಣುವಂತೆ ಅಳವಡಿಸುವುದು.
2] ಶಾಲಾ ವಾಹನದ ಚಾಲಕರ ಯಾವುದೇ ರೀತಿಯ ತಪ್ಪುಗಳ, ಕಾನೂನಿನ ನೀತಿ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ, ವಾಹನದ ಮಾಲೀಕರೇ ಸಂಪೂರ್ಣ ಹೊಣೆಗಾರರಾಗಬೇಕೆಂದು, ಶಾಲಾ ಆಡಳಿತ ಮಂಡಳಿಯವರು ಖಾಸಗಿ ವಾಹನ ಮಾಲೀಕರೊಂದಿಗೆ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ವಾಹನಗಳಿಗೆ ಸಂಬಂಧಿಸಿದಂತೆ ಆರ್.ಸಿ, ಐಸಿ, ಎಫ್.ಸಿ, ಮತ್ತು ಟ್ಯಾಕ್ಸ್ ಕಾರ್ಡಗಳ ಮಾನ್ಯತೆ ಹೊಂದಿರತಕ್ಕದ್ದು.
3] ಶಾಲಾ ಬಸ್ಸುಗಳು ಮತ್ತು ಇತರೆ ವಾಹನಗಳ ಚಾಲಕರುಗಳು ಅವರವರ ವಾಹನಗಳಲ್ಲಿಯೇ ಇರುವಂತೆಯೂ, ಅನಗತ್ಯವಾಗಿ ಶಾಲೆಯಲ್ಲಿ ಎಲ್ಲೆಂದರಲ್ಲಿ ತಿರುಗಾಡದಂತೆಯೂ ವಿಶೇಷವಾಗಿ ಶಾಲಾ ಮಕ್ಕಳೊಂದಿಗೆ ಅನಗತ್ಯವಾಗಿ ಮಾತನಾಡುವುದಾಗಲೀ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗುವುದಾಗಲಿ ಅದರಲ್ಲೂ ಶಾಲಾ ಮಕ್ಕಳ ಮಾನ ಗೌರವಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ವರ್ತಿಸದಂತೆಯೂ ಶಾಲಾ ಆಡಳಿತದವರು ಸೂಕ್ತ ಎಚ್ಚರಿಕೆ ವಹಿಸತಕ್ಕದ್ದು.
4] ಶಾಲೆಯ ಆಟದ ಮೈದಾನ, ಈಜುಕೊಳ, ಪ್ರಯೋಗ ಶಾಲೆ, ಲೈಬ್ರೆರಿ, ಡ್ಯಾನ್ಸಿಂಗ್ ಹಾಲ್, ವ್ಯಾಯಾಮ ಶಾಲೆ ಮುಂತಾದ ಸ್ಥಳಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಪಟ್ಟ ಶಿಕ್ಷಕರು/ಮೇಲ್ವಿಚಾರಕರು ಮಾತ್ರವೆ ಹಾಜರು ಇರುವಂತೆಯೂ ಅನಗತ್ಯವಾಗಿ ಸಂಬಂಧಪಡದ ಇನ್ನಿತರೆಯವರು ಆ ಸ್ಥಳಗಳಿಗೆ ಪ್ರವೇಶಿಸದಂತೆಯೂ ಎಚ್ಚರಿಕೆ ವಹಿಸತಕ್ಕದ್ದು.
5] ಶಾಲಾ ಎಲ್ಲಾ ವಾಹನಗಳಲ್ಲಿ ಕಡ್ಡಾಯವಾಗಿ ಒಂದು ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವುದು ಹಾಗೂ ಆ ವಾಹನದಲ್ಲಿ ಎಲ್ಲಾ ಮಕ್ಕಳು ವಾಹನದಿಂದ ಮನೆಗೆ ಇಳಿಯುವ ಕಡೆಯವರೆಗೂ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವುದು.
6] ಶಾಲೆಗೆ ಪ್ರವೇಶಿಸುವ ಎಲ್ಲಾ ಕಡೆಗಳಲ್ಲಿ [ಸಣ್ಣ ಗೇಟ್ ಇದ್ದರೂ] ಸಿಸಿ ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸುವುದು.
7] ಶಾಲೆಯ ಎಲ್ಲಾ ತರಗತಿಗಳಲ್ಲಿ, ಸ್ಟಾಫ್ ರೂಂ, ಜಿಮ್, ಈಜುಕೊಳ ಹಾಗೂ ಇತರ ಅವಶ್ಯ ಕಡೆಗಳಲ್ಲಿ [ಕೈತೊಳೆಯುವ ಜಾಗವನ್ನು ಬಿಟ್ಟು] ಸಿಸಿ ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸುವುದು.
8] ಈಜು ಕಲಿಸಿಕೊಡುವವರು, ಜಿಮ್ ಇನ್ಸ್ ಸ್ಟ್ರಕ್ಟರ್ ಗಳು ಕನಿಷ್ಠ ಒಂದು ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು ಹಾಗೂ ಸೂಪರ್ವೈಸರ್ ಟೀಚರ್ ಆಗಿ ಒಬ್ಬರು ಮಹಿಳಾ ಸಿಬ್ಬಂದಿಯನ್ನು ಹೊಂದಿರಬೇಕು.
9] ಸಂಜೆ 06-00 ಗಂಟೆಯ ನಂತರ ಯಾವುದೇ ಶಾಲೆಗಳಲ್ಲಿ ತರಗತಿಗಳನ್ನು ಕಡ್ಡಾಯವಾಗಿ ನಡೆಸಬಾರದು.
10) ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಯಾವುದೇ ಸ್ಪರ್ಧೆಗಳನ್ನು ಸಂಜೆ 6-00 ಗಂಟೆಯೊಳಗೆ ಮುಗಿಸಿ ಕಡ್ಡಾಯವಾಗಿ ಮಕ್ಕಳನ್ನು ಮನೆಗೆ ವಾಪಸ್ಸು ಕಳುಹಿಸಿಕೊಡುವುದು.
11] ಕ್ಲಾಸ್ ಟೀಚರ್ಸ್ ಗಳ, ಶಾಲಾ ವಾಹನಗಳ ಚಾಲಕರ/ಸಿಬ್ಬಂದಿಗಳ, ಆಯಾಗಳ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ನಂಬರುಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳ ಪೋಷಕರಿಗೆ ನೀಡತಕ್ಕದ್ದು.
12] ಪ್ರತಿಯೊಂದು ಶಾಲೆಯಲ್ಲಿ ಶಾಲಾ ಪ್ರಿನ್ಸಿಪಾಲರ ನೇತೃತ್ವದಲ್ಲಿ ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಕಮಿಟಿಯನ್ನು ರಚಿಸಿ, ಯಾವುದೇ ಅಹಿತಕರ ಘಟನೆಗಳು ಮುಂದಕ್ಕೆ ನಡೆಯದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಬಗ್ಗೆ ಪ್ರತಿ ತಿಂಗಳು ಮೀಟಿಂಗ್ ನಡೆಸತಕ್ಕದ್ದು. ಪ್ರತಿ ಕಮಿಟಿಯು 4 ಜನ ಮಹಿಳೆಯರನ್ನೊಳಗೊಂಡಿರಬೇಕು.
13] ಶಾಲಾ ಸಿಬ್ಬಂದಿಗಳಿಗೆ, ಭದ್ರತಾ ಕರ್ತವ್ಯದವರಿಗೆ ಮತ್ತು ಇತರ ಕೆಲಸಗಾರರಿಗೆ ಮಕ್ಕಳ ಹಕ್ಕು, ಪೋಸ್ಕೋ ಕಾಯ್ದೆ, ಲಿಂಗ ತಾರತಮ್ಯ ಮುಂತಾದ ಸೂಕ್ಷ್ಮತೆಯ ಬಗ್ಗೆ ನಿರಂತರವಾಗಿ ಜಾಗೃತಿಯನ್ನು ಮೂಡಿಸುವ ಕ್ರಮಕೈಗೊಳ್ಳುವುದು.
14] ಶಾಲೆಗೆ ಭದ್ರತಾ ಕರ್ತವ್ಯದ ಸಿಬ್ಬಂದಿಯವರನ್ನು ಖಾಸಗಿ ಏಜೆನ್ಸಿಗಳಿಂದ ಪಡೆದುಕೊಳ್ಳುವ ಸಂದರ್ಭದಲ್ಲಿ ಸರಕಾರದಿಂದ ಮಾನ್ಯತೆ ಪಡೆದಂತಹ ಏಜೆನ್ಸಿಗಳಿಂದ ಮಾತ್ರ ಪಡೆಯತಕ್ಕದ್ದು. ಯಾವುದೇ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸುವಾಗ ಅವರ ಪೂರ್ವ ಚರಿತ್ರೆಯನ್ನು ಸ್ಥಳೀಯ ಪೊಲೀಸರಿಂದ ಪರಿಶೀಲನೆ ನಡೆಸಬೇಕು.
No comments:
Post a Comment